ಹೆಬ್ಬಾರ, ಕೆ ಕೆ
	1912-96. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದರು. ಕಟ್ಟಿಂಗೇರಿ ಕೃಷ್ಣ ಹೆಬ್ಬಾರ ಎಂಬುದು ಇವರ ಪೂರ್ಣ ಹೆಸರು. ಉಡುಪಿಗೆ ಸಮೀಪದ ಕಟ್ಟಿಂಗೇರಿಯಲ್ಲಿ 1912ರಲ್ಲಿ ಜನಿಸಿದರು. ಆರಂಭದ ಶಿಕ್ಷಣವನ್ನು ಉಡುಪಿ ಹಾಗೂ ಮೈಸೂರುಗಳಲ್ಲಿ ಪಡೆದರು. ತಮ್ಮ 14ನೆಯ ವಯಸ್ಸಿನಲ್ಲಿಯೇ ಹೊಟ್ಟೆಪಾಡಿಗಾಗಿ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಜೀವನ ಪ್ರಾರಂಭಿಸಿದರು. ಚಿತ್ರಗಳ ಮೂಲಕವೇ ಮಕ್ಕಳಿಗೆ ಪಾಠ ಹೇಳುತ್ತಿದ್ದ ಇವರ ಪ್ರತಿಭೆಯನ್ನು ಕಂಡ ಅದೇ ಶಾಲೆಯ ವ್ಯವಸ್ಥಾಪಕರಾಗಿದ್ದ ಒಬ್ಬ ಜರ್ಮನ್ ಮಿಶನರಿ ಇವರನ್ನು ಕಲಾ ಜೀವನದಲ್ಲಿ ದೂಡಿದರು. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟ ಇವರು ಮೈಸೂರಿನ ಚಾಮರಾಜೇಂದ್ರ ಕಲಾಶಾಲೆಯನ್ನು ಸೇರಿಕೊಂಡರು. ಕೆಲಕಾಲಾನಂತರ ಈ ಸಂಸ್ಥೆಯನ್ನು ತೊರೆದು ಮುಂಬಯಿಯ ಛಾಯಾಚಿತ್ರ ಗೃಹವೊಂದರಲ್ಲಿ ಕೆಲಸ ಮಾಡುತ್ತ ಜಿ.ಎಸ್.ದಂಡಾವತಿಮಠ ಅವರ ನೂತನ ಕಲಾಮಂದಿರದಲ್ಲಿ ಕಲೆಯ ಅಧ್ಯಯನಕ್ಕಾಗಿ ಸೇರಿದರು. 1938ರಲ್ಲಿ ಜೆ.ಜೆ.ಕಲಾಶಾಲೆಯಿಂದ ರೇಖಾಚಿತ್ರ ಮತ್ತು ವರ್ಣಚಿತ್ರ ಕಲೆಗಳಲ್ಲಿ ಡಿಪ್ಲೊಮಾ ಪಡೆದು ಅದೇ ಸಂಸ್ಥೆಯಲ್ಲಿ 1939-40 ಹಾಗೂ 1943-47ರತನಕ ಅಧ್ಯಾಪಕರಾಗಿ ಕೆಲಸ ಮಾಡಿದರು. 1949ರಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಯುರೋಪಿಗೆ ಹೋದರು. 1949-50ರಲ್ಲಿ ಪ್ಯಾರಿಸಿನಲ್ಲಿ ಚಿತ್ರಕಲೆಯ ವಿಶೇಷ ಅಧ್ಯಯನ ಮಾಡಿದರು. ಈ ಅವಧಿಯಲ್ಲಿಯೇ ಲಂಡನ್, ಬರ್ನ್ ಮತ್ತು ಪ್ಯಾರಿಸ್ ನಗರಗಳಲ್ಲಿ ತಮ್ಮ ಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸಿದರು. 1953ರಲ್ಲಿ ಕಲಾಪ್ರದರ್ಶನದ ಜೊತೆಗೆ ಕಳುಹಿಸಲಾಗಿದ್ದ ಕಲಾವಿದರ ನಿಯೋಗದ ಸದಸ್ಯರಾಗಿ ರಷ್ಯ, ಪೋಲೆಂಡ್ ಹಾಗೂ ಪಶ್ಚಿಮ ಜರ್ಮನಿಗಳಿಗೆ ಭೇಟಿಕೊಟ್ಟರು. ಇವರ ಚಿತ್ರಗಳ ಏಕವ್ಯಕ್ತಿ ಪ್ರದರ್ಶನಗಳು ಭಾರತದ ಪ್ರಮುಖ ನಗರಗಳಲ್ಲೇ ಅಲ್ಲದೆ ನ್ಯೂಯಾರ್ಕ್, ಬರ್ಲಿನ್, ಬಾಸೆಲ್, ಸಿಡ್ನಿ, ಅಡಿಲೇಡ್ ಮೊದಲಾದ ಪ್ರಮುಖ ನಗರಗಳಲ್ಲಿ ನಡೆದಿವೆ. ಈ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಮುಕ್ತಪ್ರಶಂಸೆಗೆ ಪಾತ್ರವಾಗಿವೆ. 

	ಇವರು ಸಾಂಪ್ರದಾಯಿಕ ರೀತಿಯಲ್ಲಿಯೇ ತರಬೇತಿ ಪಡೆದವರಾದರೂ ಯಾವುದೇ ಒಂದು ಪಂಥಕ್ಕೆ ತೆಕ್ಕೆಬಿದ್ದವರಲ್ಲ. ಪಾಶ್ಚಾತ್ಯ ಕಲೆಯಿಂದ ಪ್ರಭಾವಿತರಾಗಿದ್ದರೂ ಭಾರತೀಯ ಪುರಾತನ ಚಿತ್ರ ಸಂಪ್ರದಾಯಕ್ಕೆ ಮನಸೋತ ಇವರು ಅದಕ್ಕೊಂದು ಹೊಸ ಮುಖಕೊಟ್ಟರು;  ಮೆರುಗು ನೀಡಿದರು. ಇವರ ಕಲೆ ಜೀವನಕ್ಕೆ ಹೆಚ್ಚು ಸಮೀಪವಾಗಿದೆ. ಸಾಮಾನ್ಯರ ಜೀವನದ ಸೌಂದರ್ಯವನ್ನು ಇವರು ತಮ್ಮ ಕುಂಚದಿಂದ ಅಮರವಾಗಿಸಿದ್ದಾರೆ. ವರ್ಣವಿನ್ಯಾಸ, ನೆಳಲು-ಬೆಳಕುಗಳ ತರತಮ ಇವುಗಳಲ್ಲಿ ಇವರ ಚಿತ್ರಗಳು ತಮ್ಮದೇ ಆದ ವಿಶಿಷ್ಟ ಮುದ್ರೆಯನ್ನು ಹೊತ್ತುನಿಂತಿವೆ. ಇವರ ಚಿತ್ರಕೃತಿಗಳಲ್ಲಿ ಬ್ಯಾಲೆ ನೃತ್ಯಕಾರರು, ಲೇಜಿಮ್ ಆಟದವರು, ರಷ್ಯದ ಕುಣಿಯುವ ಹುಡುಗಿ, ನಾಗಮಂಡಲ ನೃತ್ಯಕಾರರು, ಪ್ರೀತಿ, ಉತ್ಸವದ ಕುಣಿತ, ಪಂಡಿತರು, ಮಹಾಬಲೇಶ್ವರ ಸಂತೆ, ರಂಗಪಂಚಮಿ, ತೋಳಕಾದಾಟ, ದನಗಳ ಮಾರುಕಟ್ಟೆ, ಅರುಣೋದಯ, ವಿನಾಶ, ಶರದ್ ಪೂರ್ಣಿಮಾ ಮುಂತಾದವು ಉತ್ಕøಷ್ಟ ರಚನೆಗಳೆಂದು ಖ್ಯಾತಿ ಗಳಿಸಿವೆ. 

	ಕಲೆ ಕುರಿತು ಇವರು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಪತ್ರಿಕೆಯಲ್ಲಿ ಇವರ ಅನೇಕ ಕೃತಿಗಳು ಪ್ರಕಟವಾಗಿವೆ. ಸರ್ಕಾರಿ ಹಾಗೂ ಸರ್ಕಾರೇತರ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು ಇವರ ಚಿತ್ರಗಳ ಪ್ರತಿಕೃತಿಗಳನ್ನೊಳಗೊಂಡ ಪರಿಚಯಾತ್ಮಕ ಗ್ರಂಥಗಳನ್ನು ಪ್ರಕಟಿಸಿವೆ. 

	ಇವರಿಗೆ ಅನೇಕ ಗೌರವಗಳೂ ಪ್ರಶಸ್ತಿಗಳೂ ಲಭಿಸಿವೆ. ಕಲ್ಕತ್ತ ಕಲಾ ಅಕಾಡೆಮಿಯ ಚಿನ್ನದ ಪದಕ(1939), ಭಾರತ ಸರ್ಕಾರದ ಪಾರಿತೋಷಿಕ(1948), ಮೂರು ಬಾರಿ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ(1956, 57, 58), ಪದ್ಮಶ್ರೀ ಪ್ರಶಸ್ತಿ(1961), ಲಲಿತ ಕಲಾ ಅಕಾಡೆಮಿಯ ಗಣ್ಯ ಕಲಾವಿದ ಸದಸ್ಯತ್ವ(1954), ಜರ್ಮನಿಯ ಕಲಾ ಅಕಾಡೆಮಿಯ ಸದಸ್ಯತ್ವ(1975), ಕೇಂದ್ರ ಲಲಿತ ಕಲಾ ಅಕಾಡೆಮಿಯ ಫೆಲೋ(1976), ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್.ಪದವಿ(1976), ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ(1980), ಪದ್ಮಭೂಷಣ ಪ್ರಶಸ್ತಿ(1989) ಇವು ಮುಖ್ಯವಾದುವು. 

	ಇವರು ತಮ್ಮದೇ ಆದ ಅಚ್ಚುಕಟ್ಟಾದ ಕಲಾಭವನವನ್ನು ಮುಂಬಯಿಯಲ್ಲಿ  ನಿರ್ಮಿಸಿಕೊಂಡಿದ್ದರು. ಬಾಂಬೆ ಆರ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ (1990) ಇವರು ಕವಾಸ್ಜಿ ಜಹಾಂಗೀರ್ ಆರ್ಟ್ ಗ್ಯಾಲರಿಯ ಹುಟ್ಟಿಗೂ ಕಾರಣಕರ್ತರು. ಹೋಮಿ ಭಾಭಾ ಇವರಿಗೆ ಸಹಾಯ ಮಾಡಿದ್ದರು. ಮುಂಬಯಿಯ ಕೆ.ಕೆ.ಹೆಬ್ಬಾರ್ ಆರ್ಟ್ ಫೌಂಡೇಷನ್ ಪ್ರತಿ ವರ್ಷ ಆರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ ಯಲ್ಲದೆ, ಕಲಾವಿದರನ್ನೂ ಸನ್ಮಾನಿಸುತ್ತದೆ. ಇವರು 1996 ಮಾರ್ಚ್ 29 ರಂದು ನಿಧನರಾದರು.			

				(ಆರ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ